ಕರ್ನಾಟಕದಲ್ಲಿನ ತೆರಿಗೆ ಆಕರಣೆಯ ಇತಿಹಾಸ

1957ರ ಕರ್ನಾಟಕ ಮಾರಾಟ ತೆರಿಗೆ ಅಧಿನಿಯಮವನ್ನು ವಾಣಿಜ್ಯ ತೆರಿಗೆಗಳ ಇಲಾಖೆಯು, ಮೈಸೂರು ವಿಧಾನಮಂಡಲವು ಸ್ವತಂತ್ರ ಭಾರತದ 8ನೇಯ ವರ್ಷದಲ್ಲಿ ಅಧಿನಿಯಮಿತಗೊಳಿಸಿದ ಮತ್ತು ಮೈಸೂರು ರಾಜ್ಯಪತ್ರದಲ್ಲಿ 13ನೇ ಸೆಪ್ಟೆಂಬರ್ 1957ರಂದು ಪ್ರಕಟಗೊಳಿಸಿದ ದಿನಾಂಕದಿಂದ ನಿರ್ವಹಿಸುತ್ತದೆ. ರಾಜ್ಯಗಳ ನಿರಂತರ ಪ್ರಯತ್ನದಿಂದಾಗಿ ದಿನಾಂಕ: 01-04-2005 ರಿಂದ ಕರ್ನಾಟಕ ಮಾರಾಟ ತೆರಿಗೆ ಬದಲಿಗೆ ಕರ್ನಾಟಕ ಮೌಲ್ಯವರ್ಧಿತ ತೆರಿಗೆಯನ್ನು ಜಾರಿಗೊಳಿಸಲಾಯಿತು. ಆದಾಗ್ಯೂ ಕಚ್ಚಾ ಪೆಟ್ರೋಲಿಯಂ, ಮೋಟರ್ ಸ್ಪಿರಿಟ್ (ಪೆಟ್ರೋಲಿಯಂ), ಹೈ ಸ್ಪೀಡ್ ಡೀಸೆಲ್ ಮತ್ತು ವೈಮಾನಿಕ ಇಂಧನ ಈ ಸರಕುಗಳಿಗೆ ಕರ್ನಾಟಕ ಮಾರಾಟ ತೆರಿಗೆ ಅಧಿನಿಯಮದ ಉಪಬಂಧಗಳು ಮಾತ್ರ ಅನ್ವಯವಾಗುತ್ತಿದ್ದವು.

1956ರ ಕೇಂದ್ರ ಮಾರಾಟ ತೆರಿಗೆ ಅಧಿನಿಯಮವು ಅಂತರಾಜ್ಯದಲ್ಲಿ ಮಾರಾಟ ಮಾಡಿದ ಸರಕಿನ ಮೇಲೆ ತೆರಿಗೆ ವಿಧಿಸಲು ಉಪಬಂಧ ಕಲ್ಪಿಸಿತ್ತು.

1979ರ, ಕರ್ನಾಟಕ ಪ್ರವೇಶ ತೆರಿಗೆ ಅಧಿನಿಯಮದಡಿ ಪೆಟ್ರೋಲಿಯಂ ಉತ್ಪನ್ನಗಳು, ಜವಳಿ ಉತ್ಪನ್ನಗಳು, ತಂಬಾಕು ಉತ್ಪನ್ನಗಳನ್ನೊಳಗೊಂಡು ಒಟ್ಟು 11 ಸರಕಿನ ಮೇಲೆ 1 ರಿಂದ 5ರ ವರೆಗಿನ ಅನ್ವಯವಾಗುವ ದರದಲ್ಲಿ ತೆರಿಗೆಯನ್ನು ವಿಧಿಸಲಾಗುತ್ತಿತ್ತು.

1932ರ ಮೈಸೂರು ಜೂಜು ತೆರಿಗೆ ಅಧಿನಿಯಮವು ಕುದುರೆ ಓಟದ ಮೇಲೆ ಕಟ್ಟಲಾಗುತ್ತಿದ್ದ ಜೂಜಿನ ಮೇಲೆ ತೆರಿಗೆಯನ್ನು ಆಕರಣೆ ಮಾಡುವ ಉಪಬಂಧಗಳನ್ನು ಒದಗಿಸಿತ್ತು.

1979ರ ಕರ್ನಾಟಕ ವಿಲಾಸ ತೆರಿಗೆ ಅಧಿನಿಯಮದಡಿ ಹೋಟೆಲ್, ಮದುವೆ ಮಂಟಪ, ಸಭಾಂಗಣ, ಕ್ಲಬ್ ಮತ್ತು ಆಸ್ಪತ್ರೆಗಳಲ್ಲಿ ಒದಗಿಸುತ್ತಿದ್ದ ವಿಲಾಸಗಳ ಮೇಲೆ ತೆರಿಗೆ ಆಕರಣೆ ಮಾಡಲು ಅಧಿಕಾರ ನೀಡಿತ್ತು.

1958ರ ಕರ್ನಾಟಕ ಮನರಂಜನಾ ತೆರಿಗೆ ಅಧಿನಿಯಮವು ಸಿನೆಮಾ, ಕೇಬಲ್ ಟಿ.ವಿ., ಮೋಜು, ಬೆಡಗಿನ ಪ್ರದರ್ಶನ, ಪ್ರದರ್ಶನ, ವಿನೋದ ಮುಂತಾದವುಗಳ ಮೇಲೆ ಮನರಂಜನಾ ತೆರಿಗೆಯನ್ನು ವಿಧಿಸಲು ಅಧಿಕಾರ ನೀಡಿತ್ತು.

2017ರ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮವನ್ನು ಕರ್ನಾಟಕ ವಿಧಾನ ಮಂಡಲದಲ್ಲಿ ಅಧಿನಿಯಮಿತಗೊಳಿಸಿ, ಕರ್ನಾಟಕ ರಾಜ್ಯಪತ್ರದಲ್ಲಿ ದಿನಾಂಕ: 26-06-2017ರಂದು ಪ್ರಕಟಣೆಗೊಳಿಸಿ ದಿನಾಂಕ: 01-07-2017ರಿಂದ ಅನುಷ್ಠಾನಗೊಳಿಸಲಾಗಿದೆ. ಸದರಿ ಅಧಿನಿಯಮದಲ್ಲಿ ವಾಣಿಜ್ಯ ತೆರಿಗೆಗಳ ಇಲಾಖೆಯು ನಿರ್ವಹಿಸುತ್ತಿದ್ದ ಮೇಲಿನ ಎಲ್ಲಾ ಪರೋಕ್ಷ ತೆರಿಗೆಗಳೂ ವಿಲೀನವಾಗಿವೆ. ಪ್ರಸ್ತುತ ಮದ್ಯಪಾನೀಯ ಮತ್ತು ಕಚ್ಚಾ ಪೆಟ್ರೋಲಿಯಂ, ಮೋಟರ್ ಸ್ಪಿರಿಟ್ (ಪೆಟ್ರೋಲಿಯಂ), ಹೈ ಸ್ಪೀಡ್ ಡೀಸೆಲ್, ವೈಮಾನಿಕ ಇಂಧನ ಹೊರತುಪಡಿಸಿ ಎಲ್ಲಾ ಸರಕುಗಳೂ ಮತ್ತು ಉಲ್ಲೇಖಿಸಿದ ಕೆಲವೊಂದು ಸೇವೆಗಳನ್ನು ಹೊರಪಡಿಸಿ ಉಳಿದೆಲ್ಲಾ ಸೇವೆಗಳನ್ನೂ ಸಹಿತ ಒಳಗೊಂಡಿರುತ್ತದೆ.

1976ರ ಕರ್ನಾಟಕ ವೃತ್ತಿಗಳು, ವ್ಯಾಪಾರಗಳು, ಅಜೀವಿಗಳು, ಉದ್ಯೋಗಗಳ ಮೇಲಿನಿ ತೆರಿಗೆ ಅಧಿನಿಯಮವು ಸರಕು ಮತ್ತು ಸೇವಾ ತೆರಿಗೆ ಅಧಿನಿಯಮದ ಅಡಿಯಲ್ಲಿ ವಿಲೀನವಾಗಿಲ್ಲ. ಸದರಿ ಅಧಿನಿಯಮವು ವೇತನ ಪಡೆಯುವ ಉದ್ಯೋಗಿಗಳಿಗೆ ಮತ್ತು ಸ್ವಉದ್ಯೋಗ ನಿರ್ವಹಿಸುವ ವೃತ್ತಿದಾರರಿಗೆ ಅನ್ವಯಿಸುತ್ತಿದ್ದು ಗರಿಷ್ಠ ತೆರಿಗೆಯು ವರ್ಷಕ್ಕೆ ರೂ. 2500/- ಇರುತ್ತದೆ.

ವಾಣಿಜ್ಯ ತೆರಿಗೆಗಳ ಇಲಾಖೆಯು ಮಾಹಿತಿ ಮತ್ತು ಸಂವಹನಾ ತಂತ್ರಜ್ಞಾನದ ಪರಿಕರಗಳನ್ನು ಇ-ಆಡಳಿತದಲ್ಲಿ ಪರಿಣಾಮಕಾರಿಯಾಗಿ ಉಪಯೋಗಿಸಿ ಸಮಯಕ್ಕೆ ಸರಿಯಾಗಿ ಮಾಹಿತಿಯನ್ನು ವರ್ತಕರಿಗೆ ಒದಗಿಸುವುದರ ಜೊತೆಗೆ, ವಿಧಿವಿಧಾನಗಳನ್ನು ಸರಳಗೊಳಿಸುವಲ್ಲಿ, ಪಾರದರ್ಶಕತೆ, ದಕ್ಷತೆಯನ್ನು ತರಲು ಅವಶ್ಯಕತೆಗನುಗುಣವಾಗಿ ಉತ್ತಮ ಗುಣಮಟ್ಟದ ಮತ್ತು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಸೇವೆ ಒದಗಿಸುವ ಗುರಿಯನ್ನು ಹೊಂದಿದೆ.

ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್, ಬೆಂಗಳೂರು ಘಟಕವು ತಂತ್ರಾಂಶ ಸೇವೆಯನ್ನು ಒದಗಿಸುತ್ತಿದ್ದು, ಗೂಡ್ಸ್ & ಸರ್ವಿಸ್ ಟ್ಯಾಕ್ಸ್ ನೆಟ್ ವರ್ಕ್ ರವರೊಂದಿಗೆ ಸಂಪರ್ಕ ಹೊಂದಲು ಮತ್ತು ತೆರಿಗೆ ಆಡಳಿತ ಪ್ರಕ್ರಿಯೆಗಳಾದ ರಿಟರ್ನ್ ಸಲ್ಲಿಸದವರ ನಿಗಾವಣೆ, ಲೆಕ್ಕಪರಿಶೋಧನೆ, ತನಿಖೆ, ಕರನಿರ್ಧಾರಣೆ, ಮರುಕರನಿರ್ಧಾರಣೆ, ತೆರಿಗೆ ವಸೂಲಾತಿ, ಮೇಲ್ಮನವಿ, ಮರುಪಾವತಿ ಮುಂತಾದವುಗಳ ಅನ್ವಯಿಕ ತಂತ್ರಾಂಶಗಳನ್ನು ಅಭಿವೃದ್ಧಿಗೊಳಿಸಿ ಬೆಂಬಲ ನೀಡುವ ಕಾರ್ಯವನ್ನು ನಿರ್ವಹಿಸುತ್ತಿದೆ.